ಆಂಡ್ರಿಸ್, ಸ್ಟೀಫನ್
ಜರ್ಮನ್ ಕಾದಂಬರಿಕಾರ. ಈ ಶತಮಾನದ ಅತ್ಯಂತ ಸತ್ತ್ವಶಾಲಿ ಜರ್ಮನ್ ಲೇಖಕರಲ್ಲಿ ಒಬ್ಬ (ಜನನ 1906). ಯಾವ ಒಂದು ಮತದ ಪ್ರತಿಪಾದನೆಯೂ ಅವನ ಉದ್ದೇಶವಲ್ಲದಿದ್ದರೂ ಅವನ ಬರೆಹಗಳಲ್ಲಿ ಒಂದು ದರ್ಶನ ಕಂಡುಬರುತ್ತದೆ. ಜಗತ್ತಿನ ಆಕರ್ಷಣೆಗಳ ಹಿಂದೆ ಒಂದು ನೈತಿಕ ವ್ಯವಸ್ಥೆಯಿದೆ; ಆಕಸ್ಮಿಕಗಳೆಂದು ತೋರುವ ಜೀವನದ ಘಟನೆಗಳಲ್ಲಿ ಸೂತ್ರ ಧಾರಿಯಾದ ದೈವಿಕಶಕ್ತಿಯೊಂದರ ಕೈವಾಡವಿದೆ; ಅವುಗಳ ಮೂಲಕ ನಮ್ಮನ್ನು ಮೇಲು ಮೇಲಕ್ಕೆ ಕರೆದೊಯ್ಯುವುದೇ ದೇವರ ಉದ್ದೇಶ ಎಂಬುದು ಸ್ಟೀಫನ್ನನ ಅಭಿಪ್ರಾಯ. ವಾರ್ ಸಿಂಡ್ ಯೂಟೋಪಿಯ (1942) ಅವನ ಕಾದಂಬರಿಗಳಲ್ಲೆಲ್ಲ ಅತ್ಯಂತ ಪ್ರಖ್ಯಾತವಾದುದು. ಸ್ಪೇನಿನ ಅಂತರ್ಯುದ್ಧದ ಫಲವಾಗಿ ತಲೆಯೆತ್ತಿದ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ಅದರ ಕಥೆಯ ಹಿನ್ನೆಲೆಯನ್ನು ಒದಗಿಸುತ್ತವೆ. ಸೈನ್ಯಕ್ಕೆ ಸೇರಿ ಆ ಯುದ್ಧದಲ್ಲಿ ಹೋರಾಡಿದ್ದ ಸಂನ್ಯಾಸಿಯೊಬ್ಬ ಯುದ್ಧ ಕೈದಿಯಾಗಿ ತಾನು ಬಿಟ್ಟುಹೋದ ಮಠಕ್ಕೇ ಕಳುಹಿಸಲ್ಪಡುತ್ತಾನೆ. ಅಲ್ಲಿ ಅವನಿಗೆ ನಿಜವಾದ ನೆಮ್ಮದಿಯ ಅನುಭವವಾಗುತ್ತದೆ. ನೀತಿತತ್ತ್ವಗಳಿಗೂ ಪ್ರಾಪಂಚಿಕ ಪ್ರಲೋಭನೆಗಳಿಗೂ ನಡುವಣ ಘರ್ಷಣೆ ಅವನ ಇತರ ಕೆಲವು ಕಾದಂಬರಿಗಳಲ್ಲೂ ಪ್ರತಿಪಾದಿತವಾಗಿದೆ. ವರ್ಣರಂಜಿತವಾದ ಜಗತ್ತು ಮತ್ತು ವೈವಿಧ್ಯಮಯವಾದ ಪಾತ್ರಸಂಕುಲ ಸ್ಟೀಫನ್ನನ ಕಾದಂಬರಿಗಳ ವೈಶಿಷ್ಟ.								      
 
(ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ